Tuesday, January 18, 2011

ಮೂರ್ಖ(ಕ) ಪ್ರೀತಿಯ ಬ(ಬು)ಗ್ಗೆ

ನಿನ್ನ ಸನ್ನೆ, ನಿನ್ನ ಮಾತು,
ನಿನ್ನ ಬಯಕೆ, ನಿನ್ನ ಬದುಕು
ನನ್ನದೆಂಬ ಭ್ರಮೆಯ ಲೋಕ,
ವಾಸಿ ನಾನು ಮಾನಸಿಕ.....

ವಾಸ್ತವ ಸತ್ಯಗಳು ಯಾವಾಗಲು ವಿಪರೀತವಾಗಿ ಮನಸನ್ನು ನೋಯಿಸುತ್ತವೆ... ಸತಾಯಿಸುತ್ತವೆ... ಸಾಯಿಸುತ್ತವೆ.... ಅಂಥಹ ಕಹಿ ಸತ್ಯಗಳೊಂದಿಗೆ ಬದುಕುವುದಕ್ಕಿಂತ ಯಾವುದೋ ಭ್ರಮೆಯಲ್ಲಿ ಬದುಕನ್ನು ಸುಲಭವಾಗಿ ತಳ್ಳಬಹುದು. ಎಲ್ಲಿಯವರೆಗೂ ತಳ್ಳಲಾಗುವುದೋ ಅಲ್ಲಿಯವರೆಗೆ....

ಹೀಗೆ ಬದುಕಬೇಕೆಂದು ನಾನೇನು ಒತ್ತಾಯಿಸುತ್ತಿಲ್ಲ ಹಾಗೇ ಇದು ಸರಿಯಾದ ನಿರ್ಧಾರವೆಂದು ನಾನೇನು ಸಮರ್ಥಿಸುತ್ತಿಲ್ಲ. ಮನ ನೋಯಿಸುವ ಸತ್ಯಗಳು ಅದೆಷ್ಟು ಅಪಾಯಕಾರಿ ಎಂಬುದು ಊಹಿಸಲು ಅಸಾಧ್ಯ... ಅದು ಎಂಥಹ ವಿನಾಶಕ್ಕಾದರು ಕಾರಣವಾಗಬಹುದು. ಸತ್ಯವನ್ನು ಅರಗಿಸಿಕೊಳ್ಳುವವರೆಗೆ, ಮನಸು ಬುದ್ಧಿಗಳೆರಡು ಸ್ಥಿಮಿತಕ್ಕೆ ಸಿಗುವುದರೊಳಗೆ, ಅದೆಂಥ ಗಂಡಾಂತರವನ್ನು ಬೇಕಾದರೂ ಸೃಷ್ಟಿಸಬಹುದು. 


ಹಾಗಾಗಿಯೇ ನಾನು ಭ್ರಮೆಯಲ್ಲಿ ಬದುಕಿ ಅಂದಿದ್ದು...

ಅದೇನು ಅಂಥ ಕಷ್ಟದ ಕೆಲಸವಾಗುವುದಿಲ್ಲ, ಏಕೆಂದರೆ ವಾಸ್ತವವನ್ನು ಮರೆತವನಿಗೆ ಮಾತ್ರ ಸತ್ಯಗಳು ಸಾಯಿಸುತ್ತದೆ. ಅಂದರೆ ಭ್ರಮೆಯಲ್ಲಿದ್ದವನು ಮಾತ್ರ ವಾಸ್ತವವನ್ನು ಮರೆಯಲು ಸಾಧ್ಯ...


to be continued....

 ಆಪ್ತವಾದುದು ಅನಿವಾರ್ಯ
ಅರ್ಥವಾದುದು ವಿಪರ್ಯಾಸ...

Wednesday, January 5, 2011

ಮುಗ್ಧ (ಗಿದ) ಪ್ರೀತಿಗೆ ಶೀರ್ಷಿಕೆ ಏ(ಬೇ)ಕೆ?

ಹೌದು, ನಾನೊಬ್ಬ ಭಗ್ನ ಪ್ರೇಮಿ. ಬದುಕಿನ ಬದಲಾವಣೆಗೆ ಪ್ರೀತಿಯನ್ನು ಕಳೆದುಕೊಂಡವನು, ಮತ್ತೆಂದು ಪಡೆದುಕೊಳ್ಳಲಾಗದವನು, ಆ ಮಧುರ ಕ್ಷಣಗಳನ್ನು ಮರೆಯಲಾಗದವನು, ಅದರ ನೆನಪುಗಳಲ್ಲೇ ನಗುವಾಗಿರುವವನು...

ನಾನು ಅಷ್ಟೊಂದು ಅಪರಿಮಿತವಾಗಿ ಪ್ರೀತಿಸಿದ್ದ, ಕಳೆದುಕೊಂಡ ಹಾಗೂ ಪದೇ ಪದೇ ನೆನಪಾಗೋ, ಕೊನೆಯವರೆಗೂ ಮರೆಯಲಾಗದ ಆ ಪ್ರೀತಿಯ ಹೆಸರು "ಬಾಲ್ಯ". ಪ್ರತಿಯೊಬ್ಬರ ಬದುಕಿನ ಪ್ರಾರ್ಥಮಿಕ ಘಟ್ಟ. ತಮ್ಮ ತಮ್ಮ ಬಾಲ್ಯವನ್ನು ಪ್ರೀತಿಸಿದವರೆಲ್ಲರೂ  ಬದುಕಿನಲ್ಲಿ ಭಗ್ನ ಪ್ರೇಮಿಗಳೇ... ಕಾರಣ ಅದು ಬದುಕಿನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ, ನೆನಪೊಂದನ್ನು ಬಿಟ್ಟು.

ನಿಜವಾದ ಪ್ರೀತಿ ಅರ್ಥವಾಗುವುದು ದೂರವಾದ ಮೇಲೆ ಎನ್ನುವಂತೆ ಬಾಲ್ಯ ಕಳೆದ ಮೇಲೆ ನಮಗೆ ಅದರ ಮಹತ್ವ ಅರ್ಥವಾಗುವುದು.

ಬಾಲ್ಯ - ಬದುಕಿನ ಯಾವುದೇ ಚಿಂತೆಯಿಲ್ಲದೆ, ಯಾರಲ್ಲೂ ಭೇದ ಕಾಣದೆ, ತಪ್ಪುಗಳನ್ನು ಮನಸಿನಲ್ಲಿಟ್ಟುಕೊಳ್ಳದೇ, ನಿರ್ಧಾರಗಳನ್ನು ಸಮರ್ಥಿಸಿಕೊಳ್ಳದೇ, ಹಾಗೆ ಬದುಕುವ ನಿಷ್ಕಲ್ಮಶ ಪುಟ್ಟ ಮನಸು.

ದೊಡ್ಡವರಾಗುತಿದ್ದಂತೆ ಲೆಕ್ಕಾಚಾರಗಳು ಪ್ರಾರಂಭ. ಅವರಿಗಿಂತ ನಾವು ಚೆನ್ನಾಗಿರಬೇಕು, ಅವರು ನಮಗೆ ಮೋಸ ಮಾಡಿಬಿಟ್ಟರು, ನಾವು ಮಾಡಿದ ಸಹಾಯ ಅವರಿಗೆ ನೆನಪಿಲ್ಲ.... ಹೀಗೆ ಸಾವಿರ ಸಾವಿರ ಲೆಕ್ಕಾಚಾರಗಳು. ಒಳಗೊಂದು, ಹೊರಗೊಂದು...

ಮುಂದಿನದರ ಪರಿವೆ ಇಲ್ಲದೆ, ಹಿಂದೆ ನಡೆದಿದ್ದರ ಬಗ್ಗೆ ಚಿಂತೆಯಿಲ್ಲದೆ, ಇಂದು ಆನಂದವಾಗಿ ಜೀವನವನ್ನು ಕಳೆಯುವ ಕಾಲಘಟ್ಟಕ್ಕೆ ಬಾಲ್ಯ ಅನ್ನಬಹುದೇನೋ. ದೊಡ್ಡವರಾದ ಮೇಲೆ ಹಾಗೆ ಬದುಕಲು ಸಾಧ್ಯವಿಲ್ಲ. ಪ್ರತಿಷ್ಟೇಗಳಿಗೆ ಬದುಕಬೇಕಾಗುತ್ತದೆ. ಅನಿವಾರ್ಯ....

ಹಾಗಾಗಿ ನಾನೊಬ್ಬ ಬಾಲ್ಯವನ್ನು ಅರ್ಥಾತ್ ನನ್ನ ಪ್ರೀತಿಯನ್ನು ಕಳೆದುಕೊಂಡ ವಿರಹಿ. ಈ ಬದುಕಿನ ಜಂಜಾಟದಲ್ಲಿ ಅದನ್ನು ಮತ್ತೆ ಮತ್ತೆ ಬಯಸುವ ಆಕಾಂಕ್ಷಿ, ನೆನಪುಗಳ ಅಂಗಳದಲ್ಲಿ ವೀಕ್ಷಕ, ಬದುಕಿನ ಹಾದಿಯಲಿ ಪ್ರೇಕ್ಷಕ......

Monday, December 13, 2010

ಭಾವನೆಗಳಿಂದ ಕಂಡಿ(ದ್ದಿ)ದ್ದು

ಸಾವಿರ ಸಾವಿರ ಕಲ್ಪನೆಗಳ ಮಂಥನ
ಸುಖ ದುಃಖಗಳ ಮಿಶ್ರಣ
 ಬದುಕು ನಿರಂತರ ಚಿರಂತನ
- - - - - - - - - * | * - - - - - - - - - - 

ಪ್ರೀತಿಯೆಂಬ ಈ ಕಣ್ಣಮುಚ್ಚಾಲೆ ಆಟದಲ್ಲಿ
ನೀ ಸಿಕ್ಕರೂ, ಸಿಗದಿದ್ದರೂ,
ಸೋಲುವುದು ಮಾತ್ರ ನಾನೇ...

- - - - - - - - - * | * - - - - - - - - - - 

ಕಾಣೆಯಾದ ಕನಸ ಕೂಗು
ಇಲ್ಲೇ ಎಲ್ಲೋ ಕೂಗಿದೆ,
ಕೇಳದಂತೆ ನಟಿಸುವಂತೆ ಬುದ್ದಿ ಮಾತನೆಳಿದೆ.
ಮನಸು ಮಾತ್ರ ನೊಂದಿದೆ....
ಕಣ್ಣಿರಲಿ ಮಿಂದಿದೆ....

- - - - - - - - - * | * - - - - - - - - - - 

ಸತ್ತ ಕನಸುಗಳೊಡನೆ ಬದುಕುವ ಅನಿವಾರ್ಯ,
ಸತ್ತಂತೆ  ನಟಿಸೋ ಬದುಕು ನಿಜಕೂ  ಆಶ್ಚರ್ಯ.......



                           ನೆನಪು
                              ಕಣ್ಣಿರಿನೊಂದಿಗೆ....
                               ಇಂತಿ ನಿಮ್ಮ ಪ್ರೀತಿಯ...
                                                               ಸೂರಿ

Saturday, November 27, 2010

ಬದುಕ ರೂಪುಗೊಳಿಸೋ ರೂಪವಿಲ್ಲದ ನಿರೂಪಕ.

ಸಾವಿರ ಸಾವಿರ ಬಾರಿ ಅಂದ್ಕೊತಿನಿ ಇವತ್ತು ಇದನ್ನು ಇಲ್ಲಿಗೆ ಮುಗಿಸಬೇಕು ಅಂತ. ಆದ್ರೆ ಮತ್ತೆ ಮತ್ತೆ , ಕಾಡಿ ಕಾಡಿ, ತನ್ನೆಡೆಗೆ ಸೆಳೆದು ಕೊಳ್ಳು (ಕೊಲ್ಲು)ತ್ತೆ  ಆ ಮಾಯೆ. ಅದರ ಮಾಯಾವಿ ಶಕ್ತಿಯೇ ಅಂಥದ್ದು, ಬೇಕು ಅಂದ್ರೆ ಬೇಡ ಅನ್ನುತ್ತೆ, ಬಿಟ್ ಬಿಟ್ರೆ ಬಂದು ತಬ್ಬುತ್ತೆ.

ನೀವದನ್ನು ಚಟ ಅನ್ನಬಹುದು, ವೀಕ್ ಮೈಂಡ್ ಅನ್ನಬಹುದು, ಹವ್ಯಾಸ ಅನ್ನಬಹುದು, ಅದೃಷ್ಟ ಅನ್ನಬಹುದು, ಏಕಾಗ್ರತಾಹೀನ ಅನ್ನಬಹುದು, ಅಥವಾ ಬೇರೆ ಏನೋ ಅಂತ ಹೇಳಿಬಿಡಬಹುದು. ನನ್ನ ಪ್ರಕಾರ ಅದನ್ನು ಒಂದು ಪದದಲ್ಲಿ ವಿವರಿಸೋದು ಕಷ್ಟ ಅಂತ ಭಾವಿಸ್ತೀನಿ. ಏಕೆಂದರೆ ಅದು ನಮಗೆ ಎಲ್ಲವನ್ನು ಕಲಿಸಿರುತ್ತೆ. ಭಯ, ಪ್ರೀತಿ, "ವಿನಯ", ಆಸೆ, ಖುಷಿ, ಮೋಸ, ನೋವು, ತ್ಯಾಗ, ಎಲ್ಲದರ ಅನುಭವವನ್ನು ಧಾರಾಳವಾಗಿ ಧಾರೆ ಎರೆದು ಕೊಟ್ಟಿರುತ್ತೆ.

ಎಲ್ಲದರ ನಂತರವೂ ನಾವು ಅದನ್ನ ಮುಂದುವರೆಸಿಕೊಂಡು ಹೋಗ್ತಾ ಇರ್ತಿವಿ. ಉದಾಗೆ ಸಿಗರೇಟ್ ಸೇದೊನು ಭಯ, ಖುಷಿ, ನೋವು ಎಲ್ಲವನ್ನು ಅದರ ಮುಖಾಂತರ ಅನುಭವಿಸಿರುತ್ತಾನೆ, ಸಿಗರೇಟ್ ಸೇದಿಲ್ಲ ಅಂದ್ರೆ ಅವನಿಗೆ ಏನನ್ನು ಮಾಡಲಿಕ್ಕೆ ಆಗೊಲ್ಲ ಅನ್ನೋ ನಿರ್ಧಾರಕ್ಕೆ ಬಂದಿರ್ತಾನೆ. ಪ್ರೀತಿಸುವ ಹುಡುಗನಿಗೆ ತನ್ನ ಹುಡುಗಿಯ ಪ್ರೀತಿಯಿಲ್ಲದೆ ಬದುಕೇ ಇಲ್ಲ ಎಂಬ "ಭಾವ". ತಾಯಿಗೆ ಎಲ್ಲವೂ "ಕೃಷ್ಣಾ"ರ್ಪಣ ಮಸ್ತು. ಸರ್ವರೂ ಹೀಗೆ ಒಂದಲ್ಲೊಂದು ವಿಷಯದಲ್ಲಿ ತಮ್ಮ "ತಮ್ಮ"  ನಂಬಿಕೆಗೆ ಕಟಿ ಬದ್ದರು.

ವಿಷಯ ಯಾವುದೇ ಆಗಲಿ ಅದರಲ್ಲಿರುವ ನಂಬಿಕೆ ಒಂದೇ. ಅಷ್ಟರಲ್ಲೂ ಪ್ರತಿ ದಿನ ನಾವು ಬದುಕಿಗೆ ಬೇಕಾದ್ದನ್ನು "ನವೀನ" ರೀತಿಯಲ್ಲಿ ಕಲಿತಾ ಹೋಗ್ತಿವಿ,

ಆದ್ರೆ ಬರಿ ಕಲಿತರೆ ಸಾಕಾಗೋದಿಲ್ಲ,

ಕಲಿತದ್ದನ್ನು ಅಳವಡಿಸಿಕೊಳ್ಳಬೇಕಲ್ವ?

Monday, November 22, 2010

ಭಾವನೆಗಳಿಗೂ ವೇಳಾಪಟ್ಟಿ ಹಾಕುವ ಅನಿವಾರ್ಯತೆ

ಕಣ್ಣು ತೋಯ್ದಿತ್ತು, ಒಬ್ಬನೇ ಅಂಥರ್ಮುಕಿಯಾಗಿ ಅದೆಷ್ಟೋ ದೂರಗಳಿಂದ ಬರುತಿದ್ದೆ. ಮನದಲ್ಲಿ ಪ್ರಶ್ನೆಗಳಿರಲಿಲ್ಲ. ಆದ್ರೆ ಪ್ರಶ್ನೆಗೆ ಇದ್ದ ಉತ್ತರಗಳ ಪರಿಣಾಮಗಳ ಬಗ್ಗೆ ಮಂಥನ. ಸದ್ಯಕ್ಕೆ ಯಾವುದೇ ತಲೆ ಹೋಗೋ ಸಮಸ್ಯೆ ಇಲ್ಲ. ಆದ್ರೆ ನಾಳೆ ? ಎಸ್, ಇದು ನನ್ನೊಬ್ಬನ ಪ್ರಶ್ನೆ ಅಲ್ಲ, ಅದರ ಸಂಭಂಧ ವ್ಯಾಪ್ತಿ ದೊಡ್ಡದು ಅಂತ ನಾನು ಭಾವಿಸಿದಿನಿ. ಪ್ರಶ್ನೆಯನ್ನೇ ಬದಲಿಸಲಾ ಅಥವಾ ಉತ್ತರನೆ ಬದಲಾಯಿಸಲಾ, ಪ್ರಶ್ನೆಯನ್ನೇ ಮುಚ್ಚಿ ಹಾಕಲಾ, ಅಥವಾ ಉತ್ತರವನ್ನು ಮುಚ್ಚಿ ಇಡಲಾ?  I Don't know.

 ಅದೆಷ್ಟೋ ದಿನಗಳ ನಂತರ ನಾನು ಅಷ್ಟೊಂದು ಭಾವನಾತ್ಹ್ಮಕವಾಗಿದ್ದೆ ಅನಿಸುತ್ತೆ, ಕಣ್ಣ ಹನಿ ಒತ್ತಿ ಒತ್ತಿ ಬರುತ್ತಿತ್ತು. ಹೋಗುತ್ತಿದ್ದ ದಾರಿಯ ಬಗ್ಗೆ ಪರಿವೆ ಇರಲಿಲ್ಲ. ಬದುಕಿನ ದಾರಿಯ ಮುಂದಿನ ತಿರುವಿನದೆ ಚಿಂತೆ. ವಿಷಯ ವ್ಯಾಪ್ತಿಯ ಅಷ್ಟು ಸಂಭಾವ್ಯ ಲೆಕ್ಕಾಚಾರಗಳನ್ನು ಯೋಚಿಸುವ ಪ್ರಯತ್ನಕ್ಕೆ, ಸಿಕ್ಕ ಮನೆಯ ಬಾಗಿಲು ಇತಿ ಹೇಳಿತ್ತು. ಬೈಕನ್ನು ಗೇಟಿನ ಒಳಗೆ ಹಾಕಿ ಮನೆ ಹೊಕ್ಕರೆ ಅಷ್ಟು ವಿಷಯಗಳ ಮರೆವು ಆವರಿಸಿ ಕೊಳ್ಳುತ್ತಿತ್ತು . ರಾತ್ರಿ ೧೧ ರ ಸಮಯ. ಕಾಲು ಚಾಚಿದ್ದಷ್ಟೇ ನೆನಪು.



ಬೆಳಗು ಎಂದಿನಂತೆ ಬೆಂಗಳೂರಿನ ನಿತ್ಯ ಜೀವನ, ಯೋಚಿಸಲು ಯೋಜಿಸಲು ಅಸಾದ್ಯವಾದ ಬದುಕು, ವಾರದ ಮಟ್ಟಿಗೆ ಭಾವನೆಗಳನ್ನು ಮುಂದೆ ಹಾಕಬೇಕಾದ  ಅನಿವಾರ್ಯತೆ. ದಾರಿಯಿಲ್ಲ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು.
ಭಾವನೆಗಳಿಗೂ ವೇಳಾಪಟ್ಟಿ ಹಾಕುವ ಅನಿವಾರ್ಯತೆ .